ಡಚ್ ಭಾಷೆ ಮತ್ತು ಸಾಹಿತ್ಯ -
ನೆದರ್ಲೆಂಡ್ಸಿನ ಭಾಷೆಯನ್ನು ಇಂಗ್ಲಿಷ್ ಮಾತನಾಡುವ ಜನ ಡಚ್ ಎಂದು ಕರೆಯುತ್ತಾರೆ. ಆದರೆ ಆ ಜನ ಇದನ್ನು ಹಾಲಂಡ್ಸ್ ಭಾಷೆಯೆಂದು ಕರೆಯುತ್ತಾರೆ. ಬೆಲ್ಜಿಯನ್ ಪ್ರದೇಶಗಳಲ್ಲಿ ಮಾತನಾಡುವ ಫ್ಲೆಮಿಷ್ ಭಾಷೆಗೂ ಡಚ್ ಭಾಷೆಗೂ ತೀರ ಸಾಮ್ಯವಿದೆ. ಅವೆರಡೂ ಬೇರೆ ಬೇರೆಯೆನ್ನುವುದೇ ಕಷ್ಟ. ಡಚ್ ಭಾಷೆಯನ್ನು ಯೂರೋಪಿನಿಂದ ಹೊರಗೆಂದರೆ, ಇಂಡೊನೇಷಿಯ. ಸುರಿನಾಮ್ ಮತ್ತು ನೆದರ್ಲೆಂಡ್ಸ್ ಅ್ಯಂಟಲೀನ್, ಪ್ರದೇಶಗಳಲ್ಲಿ ಮಾತನಾಡುತ್ತಾರೆ. ದಕ್ಷಿಣ ಆಫ್ರಿಕದಲ್ಲಿ ಮಾತನಾಡುವ ಡಚ್ ಭಾಷೆಗೆ ಕೇಪ್ ಡಚ್ ಎಂದು ಹೆಸರು. ಅದನ್ನು ಆಫ್ರಿಕನ್ಸ್ ಭಾಷೆಯೆಂದೂ ಕರೆಯುವುದುಂಟು. ಅದೇ ಒಂದು ಸ್ವತಂತ್ರ ಭಾಷೆಯಾಗಿ ಬೆಳೆದಿದೆ.
ಡಚ್ ಭಾಷೆ ಫ್ಲೆಮಿಷ್ ಭಾಷೆಯಂತೆಯೇ ಪಶ್ಚಿಮ ಜರ್ಮನ್ ಭಾಷೆ ಸಮುದಾಯಕ್ಕೆ ಸೇರಿದ್ದು. ಈ ಎರಡು ಭಾಷೆಗಳ ಪ್ರಾಚೀನ ಇತಿಹಾಸವೂ ಒಂದೇ. ಅವು ಬೇರೆ ಬೇರೆ ಪ್ರಾದೇಶಿಕ ಭಾಷೆಗಳಾಗಿ ರೂಪುಗೊಳ್ಳುವವರೆಗೂ ಎರಡರ ಸಾಹಿತ್ಯಗಳನ್ನೂ ಫ್ಲೆಮಿಷ್ ಎಂದೇ ಕರೆಯುವ ವಾಡಿಕೆ ಇತ್ತು. ಫ್ರಿಷಿಯನ್ ಎಂಬುದೂ ಡಚ್ ಭಾಷೆಯ ಒಂದು ಪ್ರಾದೇಶಿಕ ರೂಪವಾದರೂ ಅದನ್ನು ಒಂದು ಪ್ರತ್ಯೇಕ ಭಾಷೆಯೆಂದೇ ಹೇಳಬಹುದು. ಇವಲ್ಲದೆ, ಗೆಲ್ಡರ್ಸ್, ಗ್ರೋನಿಂಗನ್ ಮತ್ತು ಓವರಿಯ್ಸಲ್ ಎಂಬ ಪ್ರಾದೇಶಿಕ ರೂಪಗಳೂ ಉಂಟು. ಇವಕ್ಕೂ ಜರ್ಮನ್ ಭಾಷೆಗೂ ಬಹು ಸಮೀಪದ ಸಂಬಂಧವಿದೆ.

ಡಚ್ ಸಾಹಿತ್ಯ: ಜನಬಳಕೆಯ ಭಾಷೆಯಲ್ಲಿ ಮೊಟ್ಟಮೊದಲಿಗೆ ಹುಟ್ಟಿದ ಡಚ್ ಸಾಹಿತ್ಯಕ್ಕೆ ಲಿಂಬರ್ಗ್, ಫ್ಲಾಂಡರ್ಸ್ ಮತ್ತು ಬ್ರಬಾಂತ್ ನಗರಗಳ ದಕ್ಷಿಣ ಭಾಗಗಳೇ ಕೇಂದ್ರಸ್ಥಾನಗಳಾಗಿದ್ದುವು. ಲಿಂಬರ್ಗಿನ ಹೆನ್ರಿಕ್ ವಾನ್ ವೆಲ್ಡೀಕ್ ತನ್ನ ಸಿಂತ್ ಸರ್ವಿಸ್ (ಸೇಂಟ್ ಸರ್ವೇಷಿಯಸ್) ಎಂಬ ಗ್ರಂಥವನ್ನು 1170ಕ್ಕೆ ಮುಂಚೆಯೇ ಬರೆದಿದ್ದ. ಇದರಲ್ಲಿ ಷಾರ್ಲಮನ್ ಮತ್ತು ಆರ್ಥರ್‍ಗಳಿಗೆ ಸಂಬಂಧಿಸಿದ ರೊಮಾನ್ಸ್ ಜಾತಿಯ ಸಾಹಸ ಕಥೆಗಳ ಪ್ರಭಾವ ಎದ್ದುಕಾಣುತ್ತದೆ. ಇದಲ್ಲದೆ ಈ ಕಾಲದಲ್ಲಿ ನೀತಿಬೋಧಕ ಕಾವ್ಯವೂ ಸ್ವಲ್ಪಮಟ್ಟಿಗೆ ಬೆಳೆಯಿತು. ಯಾಕಬ್‍ವಾನ್ ಮೀರ್‍ಲಂಟ್‍ನ (1235-1300) ಕವನ ಕೃತಿಗಳು ನೀತಿಬೋಧಕ ಕಾವ್ಯಕ್ಕೆ ನಿದರ್ಶನ. ಲೌಕಿಕ ವಿಷಯಗಳನ್ನು ಕುರಿತ ಭಾವಗೀತೆಗಳೂ ಅನುಭಾವಿ ಗದ್ಯಪದ್ಯವೂ ತಕ್ಕ ಮಟ್ಟಿಗೆ ಬೆಳೆದುವು. ಸಂನ್ಯಾಸಿಯಾದ ಹೇಡ್‍ವಿಕ್ ಎಂಬಾಕೆ ಬರೆದ ಪದ್ಯಗಳು ಅನುಭಾವ ಕಾವ್ಯಕ್ಕೆ ಪ್ರಮುಖ ನಿದರ್ಶನವಾಗಿದೆ. ಈ ಕಾಲದ ಸಾಹಿತ್ಯ ವಾನ್ ದೆನ್ ರೇನಾರ್ದ್ ಎಂಬ ಕೃತಿಯಲ್ಲಿ ಅತ್ಯುನ್ನತಿಗೇರಿತು.

ಯಾನ್ ವಾನ್ ರೂಸ್ ಬ್ರೋಕ್ (1294-1381) ಎಂಬವನ ಅನುಭಾವಿ ಕೃತಿಗಳು 14ನೆಯ ಶತಮಾನದ ಹೆಗ್ಗುರುತು. ನೆದರ್ಲೆಂಡ್ಸಿನ ನಾಗರಿಕರಲ್ಲಿ 15ನೆಯ ಶತಮಾನದಲ್ಲಿ ಒಂದು ಬಗೆಯ ಸ್ವಾತಂತ್ರ್ಯ ಪ್ರವೃತ್ತಿ ಬೆಳೆಯತೊಡಗಿತು. ಇದರಿಂದಾಗಿ ಆ ಕಾಲದಲ್ಲಿ ಹಲವಾರು ಕಾವ್ಯ ಮೀಮಾಂಸಾ ಮಂಡಲಿಗಳು ರೂಪಗೊಂಡವು. ಇವುಗಳಲ್ಲಿ ನಡೆದ ಚರ್ಚೆಗಳ ಮೂಲಕ ಅನೇಕ ಧರ್ಮನಾಟಕಗಳೂ ಪವಾಡನಾಟಕಗಳೂ ರಚಿತವಾದುವು. ಮೇರಿಕನ್ ವಾನ್ ನ್ಯೂಮಿಗೆನ್ ಮತ್ತು ಎಲ್ಕರ್‍ಲೀಕ್ ಇವೆರಡೂ ಈ ಬಗೆಯ ನಾಟಕಗಳಲ್ಲಿ ಪ್ರಖ್ಯಾತವಾದವು. 16ನೆಯ ಶತಮಾನದ ಕೊನೆಯ ವೇಳೆಗೆ ರಿನೆಸಾನ್ಸ್ ಯುಗ ಆರಂಭವಾಯಿತು. ಯೋಂಕರ್ ಯಾನ್ ವಾನ್ ದರ್ ನೂಟ್ (1539/1540- ಸು. 1595), ಹೆನ್ರಿಕ್ ಲೌರೆನ್ಸ್ ಸ್ಪೀಗಲ್ (1549-1612) ಮತ್ತು ಇವರಿಗಿಂತ ವಿಶೇಷವಾಗಿ. ಡರ್ಕ್‍ವಾಲ್ಕರ್‍ಟ್ಸ್ ಜೇಡ್‍ಕೂನ್ಸ್ಟ್, ದಟ್ ಈಸ್ ವೆಲ್ವೆನ್ಸ್ ಕೂನ್ಸ್ಟ್-ನೀತಿ ಅರ್ಥಾತ್ ಉತ್ತಮ ಜೀವನದ ಕಲೆ ಎಂಬುದು ಕೂನ್ ಹರ್ಟ್‍ನ ಮಹಾಕೃತಿ.

17ನೆಯ ಶತಮಾನದಲ್ಲಿ ಪೀಟರ್ ಕಾರ್ನಿಲೀಸ್ ಜೂóನ್ ಹೂಫ್ಟ್ (1581-1647), ಗೆರ್‍ಬ್ರಾಂಡ್ ಎಡ್ರಿಯಾನ್ಸ್ ಜೂóನ್ ಬ್ರೀಡೆರೊ (1585-1618), ಯೂಸ್ಟ್‍ವಾನ್ ದಲ್‍ವಾಂದಲ್ (1587-1679), ಕಾನ್ಸ್ಟಾಂಟಿನ್ ಹ್ಯೂನ್ಸ್ (1596-1687) ಮತ್ತು ಯಾಕಬ್ ಕ್ಯಾಟ್ಸ್ (1577-1560) ಇವರುಗಳ ಪ್ರಭಾವದಿಂದ ಡಚ್ ಸಾಹಿತ್ಯ ಬಹಳ ಉನ್ನತಮಟ್ಟಕ್ಕೇರಿತು. ಇವರೆಲ್ಲ ರೆನೆಸಾನ್ಸ್ ಯುಗದ ಅಂತಸ್ಸತ್ತ್ವವೇ ಆಗಿದ್ದವರು. ಹೂಫ್ಟ್ ಸಾನೆಟ್ಟುಗಳನ್ನಲ್ಲದೆ ನೆಚರ್ ಲಾಂಡ್ಷ್‍ಹಿಸ್ಟರೀನ್ ಎಂಬ ಇತಿಹಾಸ ಗ್ರಂಥವನ್ನೂ ಬರೆದಿದ್ದಾನೆ. ವಾಂದಲ್ ಅಭಿಜಾತ ನಾಟಕಗಳನ್ನು ರಚಿಸಿದ್ದಾನೆ. ಈತನಿಗೆ ಕಾವ್ಯದ ಎಲ್ಲ ಬಗೆಯ ಪ್ರಕಾರಗಳ ಮೇಲೂ ಪ್ರಭುತ್ವವಿತ್ತು. ಹ್ಯೂನ್ಸ್ ಮತ್ತು ಕ್ಯಾಟ್ಸ್ ಸಹ ತಮ್ಮ ಯುಗದ ವಾಣಿಗಳಾಗಿದ್ದರು. ಇವರಲ್ಲದೆ ಯಾಕೊಬಸ್ ರೇವಿಯಸ್ (1586-1658) ಮತ್ತು ಯೋನ್ಸ್ ಸ್ಟಾಲ್‍ಪರ್ಟ್‍ವಾನ್ ದರ್ ವೀದನ್ (1579-1630) ಎಂಬ ಧಾರ್ಮಿಕ ಕವಿಗಳೂ ಈ ಕಾಲದ ಖ್ಯಾತ ಸಾಹಿತಿಗಳು.

ಹದಿನೆಂಟನೆಯ ಶತಮಾನದಲ್ಲಿ ಡಚ್ ಸಾಹಿತ್ಯ ಇಳಿಮುಖವಾಯಿತು. ಈ ಶತಮಾನದ ಹೆಸರಾಂತ ಲೇಖಕರೆಂದರೆ ಪೀಟರ್ ಲಾಂಗೆನ್‍ಡೀಕ್ (1683-1756), ಎಲಿಜûಬೆತ್ ಬೆಕರ್ (1788-1804) ಮತ್ತು ಆಗ್ಯೆ ಡೇಕನ್ (1741-1804) ಎಂಬವರು. ಲಾಂಗೆನ್ ಡಈಕ್ ನಾಟಕಕಾರ. ಡೇಕನ್ ಡಚ್ ಕಾದಂಬರಿಕಾರರಲ್ಲಿ ಮೊದಲಿಗ ವ್ಯಕ್ತಿ. ಈ ಅವಧಿಯಲ್ಲಿ ರೋಮ್ಯಾಂಟಿಕ್ ಯುಗದ ಮುನ್‍ಸೂಚಕನಾದ ವಿಲ್ಲಮ್ ಬೈಲ್ಡರ್ ಡೀಕ್ (1756-1831) ಎಂಬಾತನೂ ಇದ್ದ. ಈತ ಹಾಲಂಡಿನ ಆಧ್ಯಾತ್ಮಿಕ ಜೀವನದ ಮೇಲೆ ತುಂಬ ಪ್ರಭಾವ ಬೀರಿದ. 1837ರಲ್ಲಿ ಎವರ್ ಹಾರ್ಡಸ್ ಯೋಹಾನ್ಸ್ ಪಾಟ್‍ಗೀಟರ್ (1808-1831) ಎಂಬಾತ ಡಿ ಗಿಡ್ಸ್ (ಮಾರ್ಗ ದರ್ಶಕ) ಎಂಬ ನಿಯತಕಾಲಿಕೆಯನ್ನು ಸ್ಥಾಪಿಸಿದ. ತಾನೇ ಹಲವಾರು ವಿಮರ್ಶನಾತ್ಮಕ ಲೇಖನಗಳನ್ನು ಬರೆದು ಆ ಪತ್ರಿಕೆಯಲ್ಲಿ ಪ್ರಕಟಿಸಿದ. ಇದರ ಪರಿಣಾಮವಾಗಿ ಸಾಹಿತ್ಯದ ಮಟ್ಟ ಬಹುಮಟ್ಟಿಗೆ ಹೆಚ್ಚಿತು. ಕಾನ್ರಾಡ್ ಬಸ್ಕೆನ್ ಹ್ಯೂಎಟ್ (1826-1886) ಎಂಬಾತ ಪಾಟ್‍ಗೀಟರನ ಕಾರ್ಯದಲ್ಲಿ ನೆರವಾದ. ಹಿಲ್ಡ್‍ಬ್ರಾಂಡ್ ಎಂಬ ಕಾವ್ಯನಾಮ ಇಟ್ಟುಕೊಂಡಿದ್ದ ನಿಕಾಸ್ ಬೀಟ್ಸ್ (1814-1903) ಆ ಕಾಲದ ಮಧ್ಯಮವರ್ಗದ ಸಮಾಜವನ್ನು ಹಾಸ್ಯಮಯ ರೀತಿಯಲ್ಲಿ ಚಿತ್ರಿಸಿದ ಹಲವಾರು ಲೇಖನಗಳನ್ನು ಬರೆದ. ಆನಾ ಲೂಯಿಸಾ ಗೆರ್‍ಟ್ರೂಡಾ ಬಾಸ್ ಬೂಮ್ ಟೂಸಾಂಟ್ (1812-1886), ಮತ್ತು ಯಾಕಬ್ ವಾನ್ ಲೆನೆಪ್ (1802-1887) ಎಂಬವರು ಐತಿಹಾಸಿಕವೂ ರಾಷ್ಟ್ರೀಯವೂ ಆದ ಕಾದಂಬರಿಗಳನ್ನು ಬರೆದರು. ಡೌವಿಸ್ ಡೆಕ್ಕರ್ (1820-1887) ಎಂಬಾತ ಸಮಾಜ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ಒಂದು ಕ್ರಾಂತಿಯನ್ನೇ ಎಬ್ಬಿಸಿದ. ಮುಲ್ಟಾಟುಲಿ ಎಂಬ ಕಾವ್ಯನಾಮವನ್ನಿಟ್ಟು ಕೊಂಡು ಈತ ಮ್ಯಾಕ್ಸ್ ಹಾವೆಲಾರ್ ಎಂಬ ಗ್ರಂಥವನ್ನು ಬರೆದ. ಇದರ ಎರಡು ಸಂಪುಟಗಳು 1860ರಲ್ಲಿ ಅಚ್ಚಾದವು. ಡಚ್ ಅಧಿಕಾರಿಗಳು ಜಪಾನೀಯರ ಬಗೆಗೆ ನಡೆದುಕೊಂಡ ರೀತಿಯನ್ನು ಈ ಗ್ರಂಥದಲ್ಲಿ ಡೆಕ್ಕರ್ ಉಜ್ಜ್ವಲ ಶೈಲಿಯಲ್ಲಿ ಪ್ರತಿಭಟಿಸಿದ್ದಾನೆ. ಈ ಗ್ರಂಥದಿಂದ ದೊಡ್ಡ ಕೋಲಾಹಲವೆದ್ದಿತು.

1885ರಲ್ಲಿ ಕೆಲವು ಲೇಖಕರು ಸೇರಿ ದಿ ನ್ಯೂವ್ ಗಿಡ್ಸ್ ಎಂಬ ಕೃತಿಯನ್ನು ಪ್ರಕಟಿಸಿದರು. ಈ ಲೇಖಕರನ್ನು 1880ರ ಪೀಳಿಗೆಯವರು ಎಂದು ಕರೆಯಲಾಗಿದೆ. ವಿಲ್ಲಮ್ ಕ್ಲೂಸ್ (1859-1938), ಲೋಡ್ ವಿಕ್ ವಾನ್ ಡೀಯ್ಸೆಲ್ (ಇದು ಕಾರಲ್ ಜಿ. ಎಲ್. ಆಲ್ಬರ್‍ಡಿಂಕ್ ಥೈಮ್ (1864-1952) ಎಂಬವನ ಕಾವ್ಯನಾಮ), ಫ್ರೆಡರಿಕ್‍ವಾನ್ ಈಡನ್ (1800-1932), ಆಲ್ಬರ್ಟ್ ವರ್ವೀ (1865-1937) ಇವರೆಲ್ಲ 1880ರ ಪೀಳಿಗೆಯವರು. ಈ ತಂಡದ ಪ್ರಯತ್ನದಿಂದ ಸಾಹಿತ್ಯದ ಮಟ್ಟ ಏರತೊಡಗಿತು. ಈ ಪ್ರವೃತ್ತಿ ಇಪ್ಪತ್ತನೆಯ ಶತಮಾನಕ್ಕೂ ಹರಡಿತು. ಹೆನ್ರಿಯಟ್ ರೋಲನ್ ಹೋಲ್ಸ್ಟ್ (1969-), ಯಾನ್‍ಹೆಂಡ್ರಿಕ್ ಲಿಯೊಪೋಲ್ಡ್ (1865-1925) ಮತ್ತು ಪೀಟರ್ ಕಾರ್ನೆಲಿಸ್ ಬೌಟನ್ಸ್ (1870-1943) ಇವರ ಭಾವಗೀತಾತ್ಮಕ ಗದ್ಯ ಮತ್ತು ಪದ್ಯಗಳಲ್ಲಿ ಈ ಧೋರಣೆ ವಿಶೇಷವಾಗಿ ಕಂಡುಬರುತ್ತದೆ.

1880ರಲ್ಲಿ ನಡೆದದ್ದು ವ್ಯಕ್ತಿವಾದವನ್ನು ಎತ್ತಿಹಿಡಿಯುವ ಚಳವಳಿ. ಇದರ ಬಳಿಕ ಬೇರೊಂದು ಲೇಖನವೃಂದ ಕಾಣಿಸಿಕೊಂಡಿತು. ಇವರು ಸಮಾಜವಾದೀ ಭಾವನೆಯುಳ್ಳವರು. ಹರ್ಮನ್ ಹೈಯರಮನ್ಸ್ (1864-1924) ಎಂಬಾತ ಸಾಮಾಜಿಕ ನಾಟಕಗಳನ್ನು ಬರೆದ. ಓಪ್ ಹೂಪ್ ವಾನ್ ಜಿóಗನ್ (1900) ಎಂಬುದು ಇವನ ನಾಟಕಗಳಲ್ಲಿ ಹೆಸರು ಪಡೆದ ನಾಟಕ. ಇದನ್ನು ದಿ ಗುಡ್ ಹೋಪ್ ಎಂಬ ಅಂಕಿತದಲ್ಲಿ ಇಂಗ್ಲಿಷಿಗೆ ಭಾಷಾಂತರಿಸಲಾಗಿದೆ (1912). ಡಚ್ ರಂಗಭೂಮಿಯ ಶ್ರೇಷ್ಠ ಸಾಧನೆಗಳಲ್ಲಿ ಈತನ ನಾಟಕಗಳೂ ಸೇರಿವೆ. ಎರಡು ಮಹಾಯುದ್ಧಗಳ ನಡುವಣ ಕಾಲದಲ್ಲಿ ಸಾಹಿತ್ಯದಲ್ಲಿ ಇಳಿಮುಖವೇನೂ ಕಾಣಲಿಲ್ಲ. ಆದರೆ ಈ ಅವಧಿಯ ಸಾಹಿತ್ಯಗಳಲ್ಲಿ ಭಿನ್ನ ಭಿನ್ನ ಧೋರಣೆಗಳು ಕಂಡುಬರುತ್ತವೆ. ಜಾಕ್ವಿಸ್ ಸಿ. ಬ್ಲೀಮ್ (1887-  ), ಏಡ್ರಿಯನ್ ರೋಲನ್ಡ್ ಹೋಲ್ಸ್ಟ್ (1888-  ), ಯಾನ್ ಯಾಕಬ್ ಸ್ಲೇವರ್‍ಹಾಫ್ (1898-1936) ಮತ್ತು ಹೆಂಡ್ರಿಕ್ ಮಾರ್ಸ್‍ಮನ್ (1898-1940)-ಇವರು ಈ ಮಧ್ಯಂತರ ಅವಧಿಯ ಪ್ರಮುಖ ಲೇಖಕರು. ಲೂಯಿ ಕೂಪರಸ್ (1863-1923), ಆರ್ಥರ್ ವಾನ್ ಷೆಂಡಲ್ (1874-1946), ಸೈಮನ್ ವೆಸ್ಟ್ ಡೀಕ್ (1898- ) ಮತ್ತು ಫರ್ಡಿನಂಡ್ ಬೋರ್ಡ್‍ವಿಕ್ (1884-  ) -ಇವರೆಲ್ಲ ಶ್ರೇಷ್ಠ ಕಾದಂಬರಿಕಾರರು.				(ಕೆ.ವಿ.ಎಸ್.ಟಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ